ಪೌರಸ್ತ್ಯ ಸಭೆ - ಆದಿಯಲ್ಲಿ ಒಂದಾಗಿದ್ದ ಕ್ರೈಸ್ತಸಭೆ ಕಾಲಕ್ರಮೇಣ ಒಡೆದು ಆದ ಮೂರು ಸಭೆಗಳಲ್ಲೊಂದು. ಉಳಿದ ಎರಡೆಂದರೆ ಪಾಶ್ಚಾತ್ಯ ಸಭೆ ಇಲ್ಲವೆ ರೋಮನ್ ಸಭೆ ಹಾಗೂ ಪ್ರಾಟಿಸ್ಟೆಂಟ್ ಸಭೆ. ರೋಮ್ ಪಟ್ಟಣಕ್ಕೆ ಪೂರ್ವದಿಕ್ಕಿನಲ್ಲಿದ್ದ ಸಭೆಗಳು ಪೌರಸ್ತ್ಯ ಸಭೆಗಳು. ರೋಮ್‍ನಲ್ಲಿಯೂ ಅದಕ್ಕೆ ಪಶ್ಚಿಮದಲ್ಲಿಯೂ ಇದ್ದ ಸಭೆಗಳು ಪಾಶ್ಚಾತ್ಯ ಸಭೆಗಳು. ಪಾಶ್ಚಾತ್ಯ ಸಭೆಗಳು ರೋಮ್ ಪಟ್ಟಣದಲ್ಲಿ ಪಟ್ಟದ ಗುರುವಾಗಿದ್ದ ಪೋಪನ ಆಳ್ವಿಕೆಯಲ್ಲಿದ್ದುದರಿಂದ ಅವೆಲ್ಲವುಗಳಿಗೆ ರೋಮನ್ ಕ್ಯಾತೊಲಿಕ್ ಸಭೆ ಎಂಬ ಹೆಸರು ಬಂತು. ಕ್ರಿ.ಶ. ಹದಿನಾರನೆಯ ಶತಮಾನದಲ್ಲಿ ಈ ಸಭೆಗಳ ಒಡಕು ಹುಟ್ಟಿ ಪ್ರಾಟಿಸ್ಟೆಂಟ್ ಸಭೆಗಳು ಹುಟ್ಟಿದವು. 

ಆಂತಿಯೋಕ್ಯ, ಅಲೆಕ್ಸಾಂಡ್ರಿಯ, ಜೆರೂಸಲೇಮ್, ಕಾನ್‍ಸ್ಟಾಂಟಿನೋಪಲ್ ಪಟ್ಟಣಗಳಲ್ಲಿ ಪೌರಸ್ತ್ಯ ಸಭೆಗಳ ಗುರುಪೀಠಗಳಿದ್ದುವು. ಮೊದಲ ಮೂರು ಶತಮಾನಗಳಲ್ಲಿ ಈ ಗುರುಪೀಠಗಳಿಗೆ ಅಧಿಕ ಗೌರವವೂ ದೊಡ್ಡ ಭಕ್ತಸಮೂಹವೂ ಇದ್ದುವು. ಈ ನಾಲ್ಕು ಪೀಠಗಳು ಸಮಾನ ಅಧಿಕಾರವುಳ್ಳವುಗಳಾಗಿದ್ದು ಗ್ರೀಕ್ ಪದ್ಧತಿಗಳನ್ನು ಅನುಸರಿಸುತ್ತಿದ್ದವು. ಪಾಶ್ಚಾತ್ಯ ಸಭೆಗಳಾದರೋ ರೋಮನ್ ರೀತಿ ಮತ್ತು ಪದ್ಧತಿಗಳನ್ನನುಸರಿಸುತ್ತಿದ್ದವು. ಬಳಸುವ ಭಾಷೆಯಲ್ಲಿಯೂ ಆಚಾರಗಳಲ್ಲಿಯೂ ತತ್ತ್ವ ವಿಚಾರದಲ್ಲಿಯೂ ಪೂರ್ವ ಮತ್ತು ಪಶ್ಚಿಮ ಸಭೆಗಳ ನಡುವೆ ಭೇದಗಳಿದ್ದವು. 

ಕ್ರಿ. ಶ. 326ರಲ್ಲಿ ರೋಮಿನ ಚಕ್ರವರ್ತಿಯಾದ ಕಾನ್‍ಸ್ಟ್ಯಾಂಟೈನ್ ತಾನು ನೂತನವಾಗಿ ಕಟ್ಟಿಸಿದ ಕ್ಯಾನ್‍ಸ್ಟ್ಯಾಂಟಿನೋಪಲ್ ಎಂಬ ಪಟ್ಟಣವನ್ನು ತನ್ನ ರಾಜಧಾನಿ ಮಾಡಿಕೊಂಡು ಸಕಲ ಸಿಬ್ಬಂದಿಯೊಂದಿಗೆ ಅಲ್ಲಿ ವಾಸ ಮಾಡತೊಡಗಿದ. ಅಂದಿನಿಂದ ಆ ಪಟ್ಟಣದ ಪಟ್ಟದ ಗುರುವಿಗೆ ಪೌರಸ್ತ್ಯ ಸಭೆಯ ಗುರುಗಳಲ್ಲಿ ಅಗ್ರಸ್ಥಾನ ದೊರಕಿದುದಲ್ಲದೆ ಆತ ಪೂರ್ವಸಭೆಯ ಪ್ರತಿನಿಧಿಯಾಗಿ ನಿಂತು ರೋಮಿನ ಪಟ್ಟದ ಗುರುವಿಗೆ ಸರಿಸಮಾನವೆನಿಸಿಕೊಳ್ಳಲು ಹೋರಾಡಿದ. ಈ ಸಭೆಗಳ ನಡುವೆ ವಿರೋಧ ಹುಟ್ಟುವುದಕ್ಕೆ ಇದೊಂದು ಕಾರಣ. ಒಡಕಿಗೆ ಇದ್ದ ಮುಖ್ಯ ಕಾರಣವೆಂದರೆ ಸಿದ್ದಾಂತಗಳಿಗೂ ಆಚಾರಗಳಿಗೂ ಸಂಬಂಧಪಟ್ಟಿದ್ದು. ಕ್ರಿ. ಪೂ. 381ರಲ್ಲಿ ನಡೆದ ಕ್ರೈಸ್ತ ಸಮ್ಮೇಳನದಲ್ಲಿ ಪಾವಿತ್ರಾತ್ಮ ತಂದೆಯಿಂದಲೂ ಮಗನಿಂದಲೂ ಹೋರಾಡುವವ ಎಂದು ತೀರ್ಮಾನವಾಯಿತು. ಪೌರಸ್ತ್ಯ ಸಭೆಯವರು ಮಗನಿಂದಲೂ ಎಂಬುವುದನ್ನು ನಿಷೇಧಿಸಿದರು. ಕ್ರಿ. ಶ. 451ರಲ್ಲಿ ನಡೆದ ಸಮ್ಮೇಳನದಲ್ಲಿ ಕ್ರಿಸ್ತನ ಸ್ವಭಾವದ ವಿಷಯ ಚರ್ಚೆಯಾಗಿ ಆತನಲ್ಲಿ ದೇವ ಸ್ವಭಾವವೂ ಮನುಷ್ಯ ಸ್ವಭಾವವೂ ಐಕ್ಯವಾಗಿವೆ ಎಂಬುದು ಅನುಮೋದಿಸಲ್ಪಟ್ಟಿತು. ಪೌರಸ್ತ್ಯರು ಅದನ್ನು ಅಂಗೀಕರಿಸದೆ ಕ್ರಿಸ್ತನಲ್ಲಿ ಒಂದೇ ಸ್ವಭಾವವಿತ್ತೆಂದು ವಾದಿಸಿದರು. ಹಾಗೆಯೇ ಕ್ರಿಸ್ತನ ಚಿತ್ತ ಒಂದೋ ಎರಡೋ ಎಂಬ ವಿವಾದವೂ ನಡೆಯಿತು.

ಪೌರಸ್ತ್ಯರಲ್ಲಿ ಪ್ರತಿಮೆಗಳ ಮತ್ತು ಚಿತ್ರಗಳ ಪೂಜೆ ಸಾಧಾರಣವಾಗಿತ್ತು. ಪಾಶ್ಚಾತ್ಯರು ಇದನ್ನು ವಿರೋಧಿಸಿದರು. ಅವರಲ್ಲಿ ಗುರುಗಳಾದವರು ವಿವಾಹವಾಗಬಾರದೆಂಬ ಕಟ್ಟಳೆ ಇತ್ತು. ಪೌರಸ್ತ್ಯರು ಇದಕ್ಕೆ ಸಮ್ಮತಿಸಲಿಲ್ಲ.

ಹೀಗೆ ರೋಮ್‍ನಲ್ಲಿನ ಗುರುಗಳಿಗೂ ಹೊಸ ರೋಮ್ ಎನಿಸಿಕೊಂಡ ಕ್ಯಾನ್‍ಸ್ಟ್ಯಾಂಟಿನೋಪಲ್ಲಿನ ಗುರುಗಳಿಗೂ ವಿರೋಧ ಬೆಳೆಯುತ್ತ ಬಂತು. ಕೊನೆಯಲ್ಲಿ ಕ್ರಿ.ಶ. 1054ರಲ್ಲಿ ರೋಮ್ ಗುರುವಿನ ಪ್ರತಿನಿಧಿಗಳು ಕ್ಯಾನ್‍ಸ್ಟ್ಯಾಂಟಿನೋಪಲಿಗೆ ಬಂದು ಅಲ್ಲಿನ ಗುರುವನ್ನು ಸಭೆಯಿಂದ ಹೊರಗೆ ಹಾಕಿದ್ದೇವೆ ಎಂದು ಬರೆದಿಟ್ಟು ಹೋದರು. ಪ್ರತಿಯಾಗಿ ಪೌರಸ್ತ್ಯ ಗುರು ಪಾಶ್ಚಾತ್ಯ ಸಭೆಯ ಗುರುವನ್ನು ಸಭೆಯಿಂದ ಬಹಿಷ್ಕರಿಸಿದ. ಈ ವಿವಾದ ಇಂದಿನವರೆಗೂ ನಡೆದುಬಂತು. 1965 ರಲ್ಲಿ ಈ ಬಹಿಷ್ಕಾರಗಳು ರದ್ದು ಮಾಡಲ್ಪಟ್ಟಿವೆ ಎಂದು ಉಭಯ ಸಭೆಗಳು ಗುರುಗಳೂ ಘೋಷಿಸಿದರು. ಈ ಕಾರ್ಯದಿಂದ ಎಷ್ಟರಮಟ್ಟಿಗೆ ಐಕ್ಯ ಸಿದ್ಧಿಸಿತೋ ಹೇಳಲಾಗದು.

ಪೌರಸ್ತ್ಯ ಸಭೆಯ ವಿಶೇಷ ಲಕ್ಷಣಗಳು ಇವು : ರೋಗಿಗಳ ಚಿಕಿತ್ಸೆ, ದರಿದ್ರರ ಪೋಷಣೆ, ಸಂನ್ಯಾಸಿಗಳ ಮಠಗಳನ್ನು ಮತ ಸಿದ್ಧಾಂತಗಳನ್ನು ನಂಬುವುದರಲ್ಲಿ ಸ್ವಾತಂತ್ರ್ಯ, ಮತಾಭಿವೃದ್ಧಿಯ ಕಾರ್ಯದಲ್ಲಿ ಆಸಕ್ತಿ ಮತ್ತು ಗತಿಸಿಹೋದ ಭಕ್ತರೂ ಈ ಲೋಕದಲ್ಲಿ ಜೀವದಿಂದಿರುವ ಭಕ್ತರು ಒಂದೇ ಸಭೆಗೆ ಸೇರಿದ್ದಾರೆಂಬ ನಂಬಿಕೆ.

	ಪೌರಸ್ತ್ಯ ಸಭೆಗಳಲ್ಲಿ ಸೋವಿಯತ್ ದೇಶದಲ್ಲಿರುವ ಸಭೆ ದೊಡ್ಡದೆಂದು ಹೇಳಬಹುದು. ಪಶ್ಚಿಮ ತೀರಪ್ರಾಂತ್ಯದಲ್ಲಿರುವ ಆರ್ತೊಡಾಕ್ಸ್ ಸಿರಿಯನ ಚರ್ಚ್ ಮಾರ್ ತೋಮ ಚರ್ಚ್, ಕಾಲ್ಡೀಯನ್ ಚರ್ಚ್ ಅರ್ಮೀ ನಿಯನ್ ಚರ್ಚ್ ಮೊದಲಾದವು ಪೌರಸ್ತ್ಯ ಸಭೆಗಳೇ. ಇವು ಪುರಾತನ ಆಂತಿಯೋಕ್ಯ ಜರೂಸಲೇಮ್ ಮೊದಲಾದ ಮೂಲಸಭೆಗಳ ಶಾಖೆಗಳಾಗಿದ್ದು ಪುರಾತನ ಆಚಾರಗಳನ್ನು ಕ್ರಮಗಳನ್ನೂ ಅನುಸರಿಸುತ್ತಿವೆ.
(ಎಚ್.ಎಸ್.; ಎ.ಪಿ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ